Wednesday 20 March 2013

"ನಾನು ಬರ್ತೀನಿ ನಿಂತ್ಕೋ! "



          


 ಮೋಟಣ್ಣ  ತನ್ನ ಮಗಳ ಮನೆಯಲ್ಲಿ ಭರ್ಜರಿ ಊಟ ಮುಗಿಸಿ ಮಗಳು ಅಪ್ಪನಿಗಾಗಿ ತಂದಿದ್ದ ಒಂದು ಟವಲ್ ಮತ್ತು ಒಂದು ಪಂಚೆಯನ್ನು ತೊಟ್ಟು ಮಗಳಿಗೆ bye ಹೇಳಿ ಕತ್ತಲಾಗುವಷ್ಟರಲ್ಲಿ ಊರು ಸೇರಬೇಕೆಂದು ಬಿರ ಬಿರನೆ ಹೊರಡುತ್ತಾನೆ. ಈತನ ಊರು ತನ್ನ ಮಗಳ ಊರ ಪಕ್ಕದ ಊರೇ!  ಈ ಎರಡು ಗ್ರಾಮಗಳ ಮಧ್ಯೆ ಒಂದು ದೊಡ್ಡ ಅರಣ್ಯ ಪ್ರದೇಶ, ಅದನ್ನು ದಾಟಿ ಹೋಗುವುದೇ ಇಲ್ಲಿನ ಒಂದು ದೊಡ್ಡ ಸಮಸ್ಯೆ. ಅಲ್ಲಿನ  ರಸ್ತೆಯಲ್ಲಿ ಸಂಜೆ ಆರು ಘಂಟೆ ಆಗುತ್ತಿದ್ದಂತೆಯೇ ಯಾರು ಸಹ ಓಡಾಡುವುದಿಲ್ಲ ಯಾವುದೇ ವಾಹನ ವ್ಯವಸ್ತೆ ಕೂಡ ಇಲ್ಲಿಲ್ಲ . 6 ಗಂಟೆ ಅಷ್ಟರಲ್ಲಿ ಊರ ಸೇರಿ ಬಿಡಬೇಕೆಂದು ಮೋಟಣ್ಣ ತರಾ ತುರಿಯಲ್ಲಿ ಹೊರಟಿದ್ದ.

ಅಷ್ಟರಲ್ಲಿ ಈತನ ಹಳೆ ಸ್ನೇಹಿತನೊಬ್ಬ ನನ್ನು ನೋಡಿಬಿಟ್ಟ ಕೂಡಲೇ ಎಷ್ಟೇ ಬೇಡಿಕೊಂಡರೂ ಬಿಡದೆ ಬಲವಂತವಾಗಿ ಮನೆಗೆ ಕರೆದುಕೊಂಡು ಹೋಗುತ್ತಾನೆ.
 ಸ್ನೇಹಿತನನ್ನು ಭೇಟಿ ಮಾಡಿ ಸುಮಾರು ವರ್ಷಗಳಾಗಿದ್ದವು ಆದ್ದರಿಂದ ಮೋಟಣ್ಣ ಸಹ ಇನ್ನೇನು ಮಾಡುವುದಾ ಎಂದು ಜೊತೆಯಲ್ಲಿ ಹೋಗುತ್ತಾನೆ
ಅಂದು ಮೋಟಣ್ಣನಿಗೆ ಎಲ್ಲಿಲ್ಲದ ಉಪಚಾರ, ಎಲ್ಲ ಮುಗಿದ ಮೇಲೆ ಇಬ್ಬರು ಕೂತು ಹರಟೆ ಹೊಡೆಯುತ್ತಿರುತ್ತಾರೆ , ಮೋಟಣ್ಣ ಒಮ್ಮೆ ಗಡಿಯಾರದ ಕಡೆ ಗಮನ ಹರಿಸುತ್ತಾನೆ ಒಮ್ಮೆಲೇ ಆಶ್ಚರ್ಯಗೊಳ್ಳುತ್ತಾನೆ  ಸಮಯ 5.15 ಆಗಿರುತ್ತದೆ. ತನ್ನ ಊರಿಗೆ ಹೋಗಲು ಎರಡರಿಂದ ಎರಡೂವರೆ ಗಂಟೆಯಾದರೂ ಬೇಕು..
ಈಗಾಗಲೇ ಸಮಯ 5 ಆಯ್ತು ಏನು ಮಾಡುವುದು ಎಂದು ಚಿಂತೆಗೆ ಬಿದ್ದ ಮೋಟಣ್ಣ.. ಏನಾದರೂ ಮಾಡಿ ಇಂದು ಊರಿಗೆ ಹೋಗಲೇಬೇಕು ಎಂದು ಗಟ್ಟಿ ನಿರ್ಧಾರ ಮಾಡಿ ಸ್ನೇಹಿತನಿಗೆ ಹೋಗುವುದಾಗಿ ತಿಳಿಸಿ..ಊರ ದಾರಿ ಹಿಡಿಯುತ್ತಾನೆ. 

ಹೀಗೆ ಹೋಗ್ತಾ ಇರಬೇಕಾದರೆ ಮೋಟಣ್ಣನ ಊರಿನವನೆ ಆದ ತಿಮ್ಮ
ಸ್ನೇಹಿತರೊಂದಿಗೆ ಜಗಲಿ ಮೇಲೆ ಮಾತನಾಡಿಕೊಂಡು ಕುಳಿತಿರುತ್ತಾನೆ. ಅವನನ್ನು ನೋಡಿ ಖುಷಿಯಾದ ಮೋಟಣ್ಣ, 
'ಬಾರಲೆ ತಿಮ್ಮ ಹೊತ್ತು ಮುಳುಗುವಷ್ಟರಲ್ಲಿ
ಊರ್ ಸೇರ್‌ಕೊಂಡ್ ಬಿಡುವ ' ಅಂತ ಕರೆಯುತ್ತಾನೆ ಆದ್ರೆ ತಿಮ್ಮ.. ಇಲ್ಲ ಕಣ ನೀ ನಡಿ ಮೋಟಣ್ಣ ನಾನು ಬೆಳಗ್ಗೆ ಬರ್ತೀನಿ . ಅಂತ ಹೇಳಿ ಮೋಟಣ್ಣನ ಸಾಗು ಹಾಕುತ್ತಾನೆ..ಮೋಟಣ್ಣ ನಿರಾಶೆಯಂದ ಊರ ಕಡೆ ಹೊರಡುತ್ತಾನೆ... ಇತ್ತ ತಿಮ್ಮ ಹೋಗೊದೋ ಬೇಡ್ವೋ, ಹೋಗೊದೋ ಬೇಡ್ವೋ ಅಂತ ಯೋಚಿಸ್ತಾ ಇರ್ತಾನೆ.. (ತಿಕ್ಲು ಗ್ಯಾನದ ತಿಮ್ಮ)

ಅಂತು ಇಂತು ಮೋಟಣ್ಣ ನಡ್ಕೊಂಡ್ ನಡ್ಕೊಂಡ್ ಊರಿಂದ ಸುಮಾರು ಅರ್ಧದಷ್ಟು ದೂರ ಬಂದಿರುತ್ತಾನೆ.

ಸೂರ್ಯ ಮುಳುಗಿ ಕೆಲ ಸಮಯವೆ ಕಳೆದುಹೋಗಿರುತ್ತದೆ, ನಿಧಾನವಾಗಿ ಕತ್ತಲು ಆವರಿಸಿಕೊಳ್ಳುತ್ತದೆ, ಸುತ್ತ ಯಾರೊಬ್ಬರೂ ಮೋಟಣ್ಣನಿಗೆ ಕಾಣಸಿಗುವುದಿಲ್ಲ
ಕತ್ತಲು ಭಯಾನಕವಾಗಿ ಕಾಣುತ್ತಿತ್ತು, ಮುಂದೆ ಹೋಗುತ್ತಾ ಹೋಗುತ್ತಾ ಮೋಟಣ್ಣನಿಗೆ ಭಯ ಶುರುವಾಯಿತು. ಈತನ ಕಾಲಿನಿಂದ ಒಂದು ಕಲ್ಲು ಹಾರಿ ತರಗೆಲೆಯ ಮೇಲೆ ಬಿದ್ದು ಅಲ್ಲಿ ಸ್ವಲ್ಪಶಬ್ದವಾದರೂ ಸಾಕು ಮೋಟಣ್ಣ ಹೆದರಿ ನಡುಗಿ ಹೋಗುತ್ತಿದ್ದ.
ಮೋಟಣ್ಣನಿಗೆ ಅದೆಷ್ಟು ಬೇಗ ಊರ ಸೇರುತ್ತೇನೋ ಅನ್ನಿಸಿರುತ್ತದೆ..  ಹಿಂದೆಯಾಗಲಿ, ಅಕ್ಕ ಪಕ್ಕವಾಗಲಿ ಎಲ್ಲೂ ಮೋಟಣ್ಣ ಕಣ್ಣು ಹಾಯಿಸುವುದಿಲ್ಲ..
ಆತನ ಕಣ್ಣುಗಳಿಗೆ ಮುಂದಿನ ದಾರಿ ಬಿಟ್ಟು ಬೇರೇನು ಕಾಣುತ್ತಿರಲ್ಲಿಲ್ಲ , ಕೈ ಬೀಸಿಕೊಂಡು ಒಂದೇ ಸಮನೆ ಹೋಗುತ್ತಿರುತ್ತಾನೆ, ಮುಂದೆ ಹೋದಷ್ಟೂ ಭಯ ಜಾಸ್ತಿ ಯಾಗುತ್ತಾ ಹೋಗುತ್ತದೆ, ಆಗ ಮೋಟಣ್ಣ ಹಿಂದೆ ನಾಟಕದಲ್ಲಿ ಕಲಿತ್ತಿದ್ದ ಕೆಲವು ಹಾಡುಗಳನ್ನು
ಜೋರಾಗಿ ಹೇಳಿಕೊಂಡು ಅವನಿಗೆ ಅವನೆ ಸಮಾಧಾನ ಮಾಡಿಕೊಂಡು ಬೇಗ ಊರ ಸೇರುವ ತವಕದಲ್ಲಿರುತ್ತಾನೆ , ಆದರೆ ಕತ್ತಲು ನೋಡಿದಂತೆಲ್ಲಾ ಮೋಟಣ್ಣಭಯ ಜಾಸ್ತಿಯಾಗುತ್ತಾ ಹೋಗುತ್ತದೆ , ಗಂಟಲು ಒಣಗಿ ಬಾಯಿಯೆಲ್ಲ ಅಂಟುವಂತಾಗಿರುತ್ತದೆ, ಹೀಗೆ ಹೋಗುತ್ತಿರಬೇಕಾದ್ರೆ ಮೋಟಣ್ಣನ ಹೆಗಲ ಮೇಲಿದ್ದ ಟವಲ್ ಕೆಳಗೆ ಜಾರಿ ಹಿಂದೆ ಬೀಳುತ್ತದೆ. ಪಾಪ ಮೋಟಣ್ಣನಿಗೆ ಹಿಂದೆ ತಿರುಗಿ ಟವಲ್ ಎತ್ತಿಕೊಳ್ಳುವಷ್ಟು ಧೈರ್ಯ ಇರುವುದಿಲ್ಲ.ಆದರು ಹೊಸ ಟವಲ್ ಬಿಡಲು ಮನಸ್ಸಾಗಲಿಲ್ಲ ಹಿಂದೆ ತಿರುಗದೆ ಹಾಗೆ ಮುಂದೆಯೇ ನೋಡಿಕೊಂಡು 4 ಹೆಜ್ಜೆ ಹಿಂದೆ ಹಾಕುತ್ತಾನೆ, ಟವಲ್ ಕಾಣಿಸುವುದಿಲ್ಲ, ಇನ್ನೂ 4 ಹೆಜ್ಜೆ ಹಿಂದೆ ಹಾಕುತ್ತಾನೆ,ಆಗಲೂ ಟವಲ್ ಕಾಣಿಸುವುದಿಲ್ಲ,  ಮೋಟಣ್ಣನಿಗೆ ಭಯವಾಗುತ್ತದೆ..ಮತ್ತೆ ಟವಲ್ ಹುಡುಕುವ ಪ್ರಯತ್ನ ಮಾಡುವುದಿಲ್ಲ.. ಹೋದರೆ ಹೋಯ್ತು ಮೊದಲು ಊರ ಸೇರುವ ಎಂದು ಮುಂದೆ ಹೋಗುತ್ತಾನೆ ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಅವನ ಟವಲ್ ಕಾಣಿಸುತ್ತದೆ,


  ಮೋಟಣ್ಣನಿಗೆ ಅದನ್ನು ನೋಡಿ ಆಶ್ಚರ್ಯವಾಗುತ್ತದೆ..ಟವಲ್ ಬಿದ್ದಿದ್ದು ಅಲ್ಲಿ ಇಲ್ಲಿಗೆ ಹೇಗೆ ಬಂತು ಕೆಲವು ಸಂದೇಹಗಳು ತಲೆಯೊಳಗೆ ಹೊಕ್ಕರು ಮತ್ತೆ ಟವಲ್ ಸಿಕ್ಕ ಖುಷಿಯಲ್ಲಿ ಹೆಕ್ಚು ತಲೆ ಕೆಡಿಸಿಕೊಳ್ಳುವುದಿಲ್ಲ... ಟವಲ್ ಎಲ್ಲಿ ಹೆಗಲೇರಿಸಿ ತನ್ನ ಸುಮಧುರ ರಾಗದೊಂದಿಗೆ ನಡೆಯುತ್ತಾನೆ.. ಸ್ವಲ್ಪ ದೂರ ನಡೆದ  ಮೋಟಣ್ಣ ಹಾಡುವುದನ್ನ ನಿಲ್ಲಿಸುತ್ತಾನೆ .. ಆಗ  ಮೋಟಣ್ಣನ ಹೆಗಲ ಮೇಲಿದ್ದ ಟವಲ್ ನ್ನು ಯಾರೋ ಎಳೆದುಕೊಂಡಂತೆ ಆಗುತ್ತದೆ,  ಮೋಟಣ್ಣನಿಗೆ ಅದು ಭಾಸವಾಗಿದ್ದೆ ತಡ ಎದೆಯಲ್ಲಿ ನಡುಕ ಶುರುವಾಗುತ್ತದೆ. ಕೈ ಕಾಲುಗಳು ಅಲುಗಾಡುತ್ತಿರುತ್ತವೆ. " ಅಯ್ಯಯ್ಯೋ ಯಾವ್ದೋ ಪ್ರಾರಬ್ದ ಬೆನ್ನು ಬಿದ್ದ್ ಬಿಟ್ಟಿದೆ ಯಾರಾದ್ರೂ ಕಾಪಾಡ್ರಪ್ಪೋ" ಅಯ್ಯಯ್ಯೋ ಎಂದು ಕಿರುಚಾಡುತ್ತಾ ಬಾಯೀ ಬಡಿದುಕೊಂಡು ಓಡಲು ಶುರು ಮಾಡ್ತಾನೆ.. ಹಿಂದೆ ಮಾತ್ರ ತಿರುಗಿ ನೋಡುವುದಿಲ್ಲ.
.
ಹೀಗೆ ಓಡುತ್ತಿದ್ದ ಮೋಟಣ್ಣನ ಕಿವಿಗೆ " "ನಾನು ಬರ್ತೀನಿ ನಿಂತ್ಕೋ" "ನಾನು ಬರ್ತೀನಿ ನಿಂತ್ಕೋ" ಅನ್ನೋ ಶಬ್ದ ಕಿವಿಗೆ ಬೀಳುತ್ತದೆ, ಶಬ್ದ  ಮೋಟಣ್ಣನಿಗೆ
ಕೇಳಿಸುತ್ತಿದ್ದಂತೆ  ಮೋಟಣ್ಣನ ಓಡುವ ವೇಗ ಜಾಸ್ತಿಯಾಗುತ್ತದೆ .. ಇವತ್ತು ಎಲ್ಲೆಲ್ಲೋ ಬಂದ್ ಬಿಟ್ನಲ್ಲಪ್ಪಾದೇವರೆ ಕಾಪಾಡಪ್ಪ ತಂದೆ' ಅಂತ ಬಡಬಡಾಯಿಸ್ಕೊಂಡು
ಎದ್ದು ಬಿದ್ದು ಓಡುತ್ತಿರುತ್ತಾನೆ...  ಇದ್ದಕ್ಕಿಂದಂತೆ ಮೋಟಣ್ಣ ಬೆನ್ನಿಗೆ ಕಲ್ಲು ಏಟು ಬೀಳುತ್ತದೆ ಮೊದಲೇ ಮೋಟಣ್ಣ ಭಯದಿಂದ ನರಳಿ ಹೋಗಿದ್ದ
ಕಲ್ಲು ಬಿದ್ದ ಮೇಲಂತೂ ಕಿರುಚಾಡಿಕೊಂಡು ಹೆದರಿ ಓಡುತ್ತಾನೆ , ದಾರಿಯುದ್ದಕ್ಕೂ "ಯಾರಾದ್ರೂ ಕಾಪಾಡ್ರಪ್ಪೋ
ಯಾರಾದ್ರೂ ಕಾಪಾಡ್ರಪ್ಪೋ' ಅಂತ ಕೂಗಿ ಕೊಳ್ಳುತ್ತಾ ,ನರಳುತ್ತಾ... ಬೀಳುತ್ತ ಏಳುತ್ತಾ,, ಓಡುತ್ತಿರುತ್ತಾನೆ
ಹೀಗೆ ಓಡುವಾಗ ಮೋಟಣ್ಣ ಪಂಚೆಯೂ ಕೆಳಗೆ ಬಿದ್ದು ಹೋಗುತ್ತದೆ.. ಅದನ್ನೆಲ್ಲಾ ಏನು ಲೆಕ್ಕಿಸದೆ ಮೋಟಣ್ಣ ಬದುಕಿದರೆ ಸಾಕು ಬಡಪಾಯಿ ಏನು ಓಡುತ್ತಿರುತ್ತಾನೆ.
ಅಂತೂ ಕೊನೆಗೆ ಮೋಟಣ್ಣ  ಊರ ಹತ್ತಿರ ಬಂದೆ ಬಿಡುತ್ತಾನೆ .. ಊರಲ್ಲಿ ರಾರಾಜಿಸುತ್ತಿರುವ ಬೀದಿ ದೀಪ ಗಳು ಕಾಣುತ್ತಿದ್ದಂತೆ ಮೋಟಣ್ಣ ನಿಗೆ ಒಂದು ಕಡೆ ಖುಷಿಯಾದರೂ ಹಿಂದೆ ಬಿದ್ದ ಪ್ರಾರಬ್ದದ ಭಯ ಮಾತ್ರ  ಇವನನ್ನು ಬಿಡುವುದಿಲ್ಲ, ಕೊನೆಗೂ ಹಿಂದೆ ಮಾತ್ರ ತಿರುಗಿ ನೋಡಿರುವುದೇ ಇಲ್ಲ

ಅಂತೂ ಮೋಟಣ್ಣ  ಊರ ದ್ವಾರ ಬಳಿ ಬಂದೆ ಬಿಟ್ಟ ಅಲ್ಲಿ ಬೆಳಗುತ್ತಿದ್ದ ಬೀದಿ ದೀಪದ ಬಳಿ ಬಂತು ನಿಲ್ಲುತ್ತಾನೆ. ಪಕ್ಕದ ದಾರಿಯಲ್ಲಿ ಯಾರೋ ಓಡಾಡುತ್ತಿರುವಂತೆ ಕಾಣಿಸುತ್ತದೆ ... ಈಗ ಮೋಟಣ್ಣ ನಿಗೆ  ಎಲ್ಲಿಲ್ಲದ ಧೈರ್ಯ ಬಂದುಬಿಡುತ್ತದೆ ಅದೇನಿದೆ ಹಿಂದೆ ಎಂದು ನೋಡುವ ಕುತೂಹಲವು ಕೂಡ ಬರುತ್ತದೆ.
ಸ್ವಲ್ಪ ಹೊತ್ತು ಸುಮ್ಮನೇ ನಿಂತು ಬಿಡುತ್ತಾನೆ . ಬಾಯಿಯಿಂದ ಉಸಿರು ಬಿಟ್ಟು   ಎಂದು ಸುಧಾರಿಸಿಕೊಳ್ಳುತ್ತಿರುತ್ತಾನೆ
ನಂತರ ಆದದ್ದು ಆಗಲಿ ಅಂತ ಮೋಟಣ್ಣ  ನಿಧಾನ ವಾಗಿ ನಿಧಾನ ವಾಗಿ ಹಿಂದೆ ತಿರುಗುತ್ತಾನೆ... ಹಿಂದೆ ತಿರುಗಿದ್ದೆ ತಡ ಮೋಟಣ್ಣ ಎದೆಯ ಬಡಿತ ಹೆಚ್ಚಾಗುತ್ತದೆ.. 


"ಅಂತಹದೇನಿತ್ತು ಹಿಂದೆ ಏನು ನೋಡಿದ ಮೋಟಣ್ಣ"
 

ಮೋಟಣ್ಣ  ಹಿಂದೆ ತಿರುಗುತ್ತಿದ್ದಂತೆಯೇ ಅವನಿಗೆ ಊಹಿಸಿಕೊಳ್ಳಲು ಆಗದಂತ ಒಂದು ಆತಂಕ ಕಾದಿತ್ತು
ಅದೇನೆಂದರೆ, ಮೋಟಣ್ಣ  ಹಿಂದೆ ತಿರುಗುತ್ತಿದ್ದಂತೆಯೇ ಅವನಿಗೆ ಕಣ್ಣಿಗೆ ಕಂಡದ್ದು ಏನು ಗೊತ್ತಾ
ಮೋಟಣ್ಣ ಟವಲ್ ಮತ್ತು ಪಂಚೆ ಎರಡನ್ನೂ  ಹಿಡಿದು ಹಲ್ಲು ಬಿಡುತ್ತಾ, ತಲೆ ಕೆರೆಯುತ್ತಾ ನಿಂತಿದ್ದ ತಿಮ್ಮ (ಮೋಟಣ್ಣ  ಮಗಳ ಊರು ಬಿಡುವ ಕೊನೇ ಗಳಿಗೆಯಲ್ಲಿ ಸಿಕ್ಕ್ಕಿದ್ದ ಆಸಾಮಿ)
ಅವನ್ನ ನೋಡುತ್ತಿದ್ದಂತೆಯೇ ಮೋಟಣ್ಣ ನಿಗೆ ಭಯ ದೂರವಾಗಿ ಕೋಪ ನೆತ್ತಿಗೇರಿತ್ತು

ಮೋಟಣ್ಣ  ಶುರುಹಚ್ಚಿಕೊಂಡ
ಅಲ್ಲ ಕಣೋ ಬಡ್ಡಿದೆ ನಾನು ಕರೆದಾಗ ಬರಲ್ಲ ಅಂದೇ ಈಗ ನೋಡಿದ್ರೆ ಹಿಂದೆನೆ ದೆವ್ವ ಬಂದಂಗೆ ಬಂದಿದ್ದೀಯಾ, ಬರ್ತಾ ಇದ್ದೀನಿ ಅಂತಾನೂ ಒಂದು ಮತ್ ಹೇಳಿಲ್ಲ...ಮುಂದೆ ಬಂದು ಮಾತಾಡ್ಸಕ್ಕೆ ಎನ್ಲಾ ಆಗಿತ್ತು! ಲೇ ಎಂದು ಕೋಪದಿಂದ ಗದರಿಸುತ್ತಾನೆ

ತಿಮ್ಮ ನಿಧಾನವಾಗಿ  " ನಾನು ನಾಳೆನೇ ಬರ್ಬೇಕು ಅಂತ ಇದ್ದೇ.. ಆದ್ರೆ ಇದ್ದಕ್ಕಿದಂತೆ ಮನಸ್ಸು ಚೇಂಜ್ ಆಗೊಯ್ತು ಅದ್ಕೆ ನಿನ್ ಜೊತೇನೇ ಹೋಗುವ ಅಂತ ಓಡೋಡಿ ಬಂದೆ, ಎರಡು ಸಲ ಕೂಗಿದೆ. ನೀನು ಹಿಂದೆ ತಿರುಗಿ ನೋಡ್ಲೆ ಇಲ್ಲ, ನಾನು ಸುಮ್ನೇ ಆಗ್ಬಿಟ್ಟೆ, ಅದು ಅಲ್ದೇ ನೀನ್ ಬೇರೆ ಚೆನ್ನಾಗಿ ಹಾಡು ಹೇಳ್ಕೊಂಡ್ ಹೊಂಟಿದ್ದೆ ಸುಮ್ನೇ  ನಾನೇಕೆ ನಿನ್ನ ಡಿಸ್ಟರ್ಬ್ ಮಾಡ್ಲಿ ಅಂತ ಹಿಂದೆನೇ ಹಾಡ್ ಕೇಳ್ಕೊಂಡ್ ನಾನು ಯಾವ್ದೋ ಲೋಕಕ್ಕೆ ಹೋಗ್ಬಿಟ್ಟಿದೆ.
ಮೊದ್ಲೆ ತಲೆ ತಿನ್ನೋ ಪಾರ್ಟಿ ನಿನ್ ...ದಾರಿ ಉದ್ದಕು ನಿನ್ ಜೊತೆ ಮಾತಡ್ಕೊನ್ದ್ ಬರೋ ಬದಲು ಹಿಂದೆ ನಿನ್ನ ಹಾಡ್ ಕೇಳ್ಕೊಂಡ್ ಸುಮ್ನೇ ಹೋಗೋದೆ ಸರಿ ಅನಿಸ್ತು ಅದ್ಕೆ ಹಾಗೆ ಮಾಡಿದೆ.

ಅಂಗೆ ಬರ್ತಾ ಇರ್ಬೇಕಾದ್ರೆ ನಿನ್ ಟವಲ್ ಕೆಳೆಗೆ ಬಿದ್ದೋಯ್ತು ನಾನು ಅದ್ನ ಎತ್ಕೊಂಡೆ, ನೀನ್ ಈಗ್ಲಾದ್ರೂ ನನ್ನ ನೋಡ್ತೀಯಾ ಅಂದ್ಕೊಂಡ್ರೆ ನೀನ್ ಹಿಂದಕ್ಕೆ ತಿರುಗಳೇ ಇಲ್ಲ , ಅನ್ಗೆ ಹಿದಕ್ಕೆ ಹಿಂದಕ್ಕೆ ಬಂದೆ ನಾನು ಹಿಂದೆ ಹಿಂದೆನೆ ಹೋದೆ...ಆಮೇಲೆ ನಿನ್ ಪಾಡಿಗೆ ನೀನು ಸುಮ್ನೇ ಹೋಗ್ಬಿಟ್ಟೆ.. ಆಗ ನಾನು ನಿನ್ ಟವಲ್ ಮುಂದಕ್ಕೆ ಎಸೆದೆ ನೀನು ಎಸೆದಿದ್ದ ನೋಡಲಿಲ್ಲ.. ಕೆಳಗೆ ಬಿದ್ದಿದ್ದು ಮಾತ್ರ ನೋಡಿದೆ.. ನಿನ್ ಎತ್ಕೊನ್ಡವ್ನೆ ಹೆಗೆಲಾ ಮೇಲೆ ಹಾಕೊಂಡ್ ಹೊಂಟೆ ಬಿಟ್ಟೆ, ಅನ್ಗೆ ನಾನು ನಿನ್ನ್ ಹಿಂದೆ ಬಂದ್ಬಿಟ್ಟೆ.

ಅದ್ಯಾಕೋ ಗೊತ್ತಿಲ್ಲ ನೀನು ಹಾಡ್ ಹೇಳೊದನ್ನ ನಿಲ್ಸ್ ಬಿಟ್ಟೆ ನಂಗೆ ಬೇಜಾರಾಯ್ತು ಅದ್ಕೆ ಟವಲ್ ಎಳೆದೆ ...ಟವಲ್ ಎಳೆದಿದ್ದೆ ತಡ  ನೀನು ನೋಡಿದ್ರೆ ಓಡಕ್ಕೆ ಶುರು ಮಾಡ್ಬಿಟ್ಟೆ
ನೀನು ಓಡೋದನ್ನ ನೋಡಿ ನನಗೆ ಭಯ ಆಗೊಯ್ತು... ಈಗಾಲಾದ್ರೂ ಕೂಗಿ ಬಿಡುವ ಅಂತ "ನಾನು ಬರ್ತೀನಿ ನಿಂತ್ಕೋ,"ನಾನು ಬರ್ತೀನಿ ನಿಂತ್ಕೋ ಎರಡು ಮೂರು ಸಲ ಕೂಗ್ದೇ ನೀನ್ ನಿಂತಕೊಳ್ಳೆ ಇಲ್ಲ..ನನಗೂ ಓಡಿ ಓಡಿ ಸುಸ್ತಾಯ್ತು 
 ಮುಂದಕ್ಕೆ ಓಡಕ್ಕೆ ಆಗ್ಲಿಲ್ಲ.. ಹಿಂದೆನೆ  ಎಲ್ಲಿ ಓಬ್ನೇ ಉಳಿದುಕೊಂಡು ಬಿಡ್ತಿನೋ ಅಂತ ಬೇರೆ ದಾರಿ ಇಲ್ದೇ ನಿನಗೊನ್ದ್ ಕಲ್ಲು ತಗೊಂಡ್ ಹೊಡೆದೆ.. ಆಗ್ಲಾದ್ರೂ ನೀನ್ ನಿಲ್ಲುತ್ತೀಯ ಇಬ್ರೂ ಜೊತೇಲಿ ಹೋಗುವ ಅನ್ಕೊನ್ದೆ ನೀನ್ ನೋಡಿದ್ರೆ ಪಿ ಟಿ ಉಷಾ ರೇಂಜ್ ನಲ್ಲಿ ಓಡಿ ಬಂದೆ,  ಅಲ್ಲ ಮೋಟಣ್ಣ  ಪಾಟೀ ಫಾಸ್ಟ್ ಆಗಿ ಓಡ್ತೀಯಲ್ಲ ಹೊಟ್ಟೆಗೆ ಏನ್ ತಿನ್ತೀಯೋ
ನನಗಂತು ಸುಸ್ತ್ ಆಗೊಯ್ತು .. ಬಾರಿ ಗಟ್ಟಿ ಮನ್ಸ ಬಿಡು ನೀನು"

ಇದಾನೆಲ್ಲಾ ಕೇಳಿದ ಮೋಟಣ್ಣ ದಗ ದಗ ಅಂತ ಬೆಂಕಿ ಉರ್ದನ್ಗೆ ಉರಿತಾ ಇದ್ದಾ... ಎಲಾ ಮುನ್ಡೆ ಮಗ್ನೆ ನನ್ಗೆ ಜೀವಾನೆ ಹೋಗಿ ವಾಪಸ್ ಬನ್ದನ್ಗೆ ಆಗದೆ..
ಮಾಡೋದೆಲ್ಲ ಮಾಡ್ಬಿಟ್ಟೂ  ಹೊಟ್ಟೆಗೆ ಏನ್ ತಿನ್ತೀಯ ಅಂತ ಬೇರೆ ಕೇಳಿಯಾ, ನನ್ನ್ ಜಾಗದಲ್ಲಿ ನೀನ್ ಇದ್ದಿದ್ರೆ ಗೊತ್ತಾತೀತು ಎನ್ ತಿನ್ತೀನಿ ಅಂತ
ಲೇ ಅಂತ ಅವನ ತಲೆ  ಹಿಡ್ಕೊಂಡ್ ಕುಕ್ಕಿ ಬಿಡ್ತಾನೆ ಮೋಟಣ್ಣ !!! :) :) :)

"(ಸ್ನೇಹಿತರೆ ಭಯ ಅನ್ನೋದು ನಮ್ಮೊಳಗೆ ಬಂದ್ ಬಿಟ್ರೆ ಹೀಗೆಲ್ಲ ಆಗೋದು ಸಹಜ, ಮೋಟಣ್ಣ  ಭಯ ಬಿಟ್ಟು ಆಗಲೇ ಹಿಂದೆ ತಿರುಗಿ ನೋಡಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲವೇನೋ . ಆದ್ರೆ ಏನ್ ಮಾಡೋದು ಭಯ ಅನ್ನೋದು ಮೋಟಣ್ಣ ಹಾಗೆ ಮಾಡಿತ್ತು.)"

ಭಯ ಎಲ್ಲರನ್ನೂ ಬಗ್ಗಿಸುತ್ತದೆ

ಧನ್ಯವಾದ
ಸೋಮೇಶ್ ಎನ್ ಗೌಡ
 



 

 

2 comments:

  1. Chennagidhe, thimma na parichaya katheya koneyalli thiruvu kodokke upyogisidhre kuthoohala hechchaagthitthu.. :-)

    ReplyDelete
  2. ಅದ್ಬುತ ಬರಹ, ಸೋಮೇಶ್ ಅವರೇ!!

    ನೀವೊಬ್ಬ ಪರಿಪಕ್ವ ಸಾಹಿತಿಯಾಗಿ ರೂಪುಗೊಂಡು, ಮೇಲ್ಪಂಕ್ತಿ ಸಾಧಕರ ಸಾಲನಲ್ಲಿ ಗುರುತಿಸಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಯುವ ಜನತೆಯನ್ನು ಸಾಹಿತ್ಯದೆಡೆಗೆ ಸೆಳೆಯುವಲ್ಲಿ ಮಹತ್ವದ ಪಾತ್ರ ನಿಮ್ಮದು. ಶುಭವಾಗಲಿ !!

    ReplyDelete